ಅಮ್ಮನ ಆ ಬೆಳಗಿನ ಪರಿಶ್ರಮದ ಫಲ ತಿಂಡಿಯು ಎಷ್ಟೊಂದು ರುಚಿ ಇತ್ತು, ನಾನೇಕೆ ಹೇಳದೇ ಬಂದೆ.....
ಆ ಅಡುಗೆ ಭಟ್ಟನಿಗೆ ಅವನ ಅದ್ಭುತ ಅಡುಗೆಯನ್ನು ಶ್ಲಾಘಿಸುತ್ತಾ ಒಂದು ಮಾತು ಹೇಳಬೇಕಿತ್ತು.....
ಆ ಕಲಾವಿದನ ಪ್ರಶಂಸೆಯಲ್ಲಿ ಇದೂ ಹೇಳಬಹುದಿತ್ತು.....
ಆ ನಟನ ಅಭಿನಯಕ್ಕೆ ನಿಂತು ಚಪ್ಪಾಳೆ ಹೊಡೆಯಬೇಕಿತ್ತು.....
ಆ ಕಲೆಯ ಬೆಲೆಯನ್ನು ಅಳೆಯಲಾರದ ನಾನು ಚೌಕಾಸಿ ಮಾಡಬಾರದಿತ್ತು.....
ಇಂತಹ ಎಷ್ಟು ಕ್ಷಣಗಳು ನಮ್ಮೆಲ್ಲರ ಬಾಳಿನಲ್ಲಿ ದಿನನಿತ್ಯವೆಂಬಂತೆ ನಡೆದು ಹೋಗಿರುತ್ತದೆ. ಅಂತಹ ಒಂದು ಅನುಭವ ಸರಣಿಯ ಶುರು ಕಳೆದ ತಿಂಗಳ ಒಂದು ಗುರುವಾರ ರಾತ್ರಿ ಓಂತಾರಾ ಕಲಾ ಕುಟೀರದಲ್ಲಿ ಆರಂಭವಾಯಿತು..
ಕೋಟೆಯ ಅರಮನೆಯ ಬಾಗಿಲ ಹೋಲುವ ಮಹಾ(literally) ದ್ವಾರ ಅದರ ಸುತ್ತ ಹಂದರದಂತೆ ಹಬ್ಬಿರುವ ಅಗಾಧ ಕಲಾ ಸೋಬಗಿನ ಮೊಗಸಾಲೆ (portico).. "ತಡೆಯಿರಿ" ಎಂದು ನಮ್ಮ ಒಳ ಹೋಗದಂತೆ ತಡೆದ ಆತ್ಮೀಯ ಶ್ರೀನಿವಾಸರ ಕೈಗಳು.. ಇವು ನಮ್ಮ ಅವಿಸ್ಮರಣೀಯ ಅನುಭವದ ಮೊದಲ ಕೆಲ ನಿಮಿಷಗಳು....
ಆ ಬಾಗಿಲ ಚಿಲಕ ಹಿಂದೆಂದೂ ಕಂಡಿರದ ಗಾತ್ರದ್ದು, ತೆರೆದಾಗ ಕಂಡದ್ದು ಆರತಿ ಹಿಡಿದು ನಿಂತ ತಾಯಿ.. ಆರತಿ ಬೆಳಗಿಸಿಕೊಳ್ಳುವಾಗ ಕಂಡ ಆ ಕಲೆಯ ದೃಶ್ಯ ನಮ್ಮನ್ನೆಲ್ಲ ಮಂತ್ರ ಮುಗ್ಧರನ್ನಾಗಿಸಿತು.. ಬೇಲೂರು ಹಳೇಬೀಡು ಹಂಪಿಯ ದೇವಾಲಯಗಳು, ಮೈಸೂರಿನ ಅರಮನೆ ಕಲಾ ಸಂಗ್ರಹಗಳ ನೆನಪಿಸಬಲ್ಲ ಅದ್ಭುತ ಕಲೆಗಳ ಸರಣಿ ಆ ಹಾಲ್(hall)ನಲ್ಲಿತ್ತು . ನಮ್ಮ suite ಕಡೆ ಕೈಸನ್ನೆ ಮಾಡಿದಾಗ ಅರಮನೆಯಲ್ಲಿನ ರಾಜ ರಾಣಿಯರ ಕೋಣೆಯಂತಿದ್ದ ಆ ಅತಿ ವಿಶಾಲ ಕೋಣೆಯಲ್ಲ, ಸಣ್ಣ ಮನೆ.. ಅಲ್ಲಿನ ಪ್ರತಿಯೊಂದು ಸಾಮಾನು ಸರಂಜಾಮುಗಳೂ ನಾವು ರಾಜ ರಾಣಿಯರೆಂಬ ಭಾವನೆಗೆ ಪುಷ್ಟಿ ಕೊಡುವಂತಿದ್ದವು..
ಶುಚಿಯಾದ ಊಟದ ವ್ಯವಸ್ಥೆ ಮಾಡಿದ ಭಟ್ಟರು ಪಶ್ಚಿಮ ಬಂಗಾಲದವರು ಆದರೆ ಬಡಿಸಿದ್ದು ಅಚ್ಚ ಕರ್ನಾಟಕ ಪದಾರ್ಥಗಳು. ಊಟದ ನಂತರ ಹರಟಲು ಕೂರಲಿರುವ ಆ ದೊಡ್ಡ ಪ್ರಾಂಗಣ, ಅಲ್ಲಿಯೂ ಶಿಲ್ಪಕಲೆ ಮತ್ತು ಶಿಲ್ಪಗಳ ಕೆಳಗೆ ಕೈಯಲ್ಲಿ ಕೆತ್ತಿದ ಶ್ಲೋಕಗಳು. ಒಟ್ಟಾರೆ ನಿಮ್ಮ ದಿವ್ಯಾನುಭವವನ್ನು ಪ್ರತಿ ಹೆಜ್ಜೆಯಲ್ಲೂ ಒಂದು ಹೆಜ್ಜೆ ಮೇಲೊಯ್ಯಲು ಆ ಓಂತಾರಾದ ಜನಕನ ಪ್ರಯತ್ನ.
ರಾತ್ರಿ ಮಲಗುವ ಮುನ್ನ ಕೆಲವು ಮಹಡಿಗಳ ಸಂದರ್ಶನ ಮಾಡಿಸಿ ಶ್ರೀನಿವಾಸರು ನಮ್ಮ ಅರಮನೆಯ ಸುಪ್ಪತ್ತಿಗೆಯ ಕನಸಿನ ಲೋಕದಲ್ಲಿ ಬರಲಿರುವ ಪಾತ್ರಗಳ ಪರಿಚಯವನ್ನು ಮಾಡಿಸಿದಂತಿತ್ತು. ಅತಿ ವಿಶಿಷ್ಟ ಯೋಗಗೃಹ, ಪುಟಾಣಿ ಮಕ್ಕಳ ಸಂತಸಿಸಲು ಅವರದೇ ಸಣ್ಣ ಲೋಕ, ಚಿಕ್ಕ ದೊಡ್ಡವರೆನ್ನದೇ ಎಲ್ಲರಿಗೂ ನಮ್ಮ ಪೂರ್ವಜರ indoor ಆಟಗಳ ಪರಿಚಯ ಮಾಡಿಸುವ ಆಟದ ಮನೆ, ಈ ಎಲ್ಲಾ ಸ್ಥಳಗಳಲ್ಲೂ ಮತ್ತೆ ಶ್ರೀ ಆನಂತರಾಮರ ಕಲಾಪ್ರಿಯತನದ ತಪ್ಪಿಸಲಾಸಾಧ್ಯವಾದ ಸ್ಪಷ್ಠ ಛಾಪು.
ಮರುದಿನ ಮುಂಜಾನೆ:
ಬೆಳಗಿನ ನನ್ನ ನಡುಗೆಗೆ ಒಂದಿನಿತೂ ಬೆಚ್ಚದೆ ಬೆದರದೆ ಹಿಂದೆ ಹಿಂದೆಯೇ ಬಂದ ಅಲ್ಲಿನ ಸಾಕು ನವಿಲು ಶುಭ ಶುಭೋದಯದ ಸೂಚನೆಯಿತ್ತಿತು. ನಡೆವಾಗ ಅಲ್ಲಲ್ಲಿ ಕೃಷಿಯ ಪ್ರಯತ್ನಗಳ ಕುರುಹುಗಳು, ಸುಂದರವಾಗಿ ಮೈದೂಡುತ್ತಿರುವ ಹೂ ತೋಟ, ಚಕ್ರಾಕಾರದ ಬರಿದಾದ ಈಜುಕೊಳ. ಅಲ್ಲಿ ಕೆಲಸಕ್ಕೆ ಬಂದ ಕಾರ್ಮಿಕರಿಗೆ ಬೆಳಗಿನ ಶ್ಲೋಕಗಳ ಪಾಠ 'ಕರಾಗ್ರೇ ವಸತೇ ಲಕ್ಷ್ಮಿ..' ಇಂದ ಶಾಂತಿ ಮಂತ್ರದವರೆಗೆ ಸುಮಾರು ಹದಿನೈದು ಶ್ಲೋಕಗಳು.
ತಿಂಡಿಯ ವ್ಯವಸ್ಥೆ ಮೇಲ್ ಮಹಡಿಯ ಹೊರಗಿನ ಪ್ರಾಂಗಣದಲ್ಲಿ. ಚಹಾ ಸವಿಯುತ್ತಾ ಚುಮು ಚುಮು ಚಳಿಯ ಓಡಿಸಲು ಶುಭ್ರ ಸೂರ್ಯರಶ್ಮಿಗೆ ಮೈ ಒಡ್ಡಿ ನಿಂತಾಗ ಕೆಳಗಿನಿಂದ ಬೆಳಗಿನ ನನ್ನ ನಡುಗೆಯ ಸಾಥಿ ನವಿಲಿನ ಕರೆ
ಶ್ರೀನಿವಾಸರು ತಮ್ಮ ತಿಂಡಿ ಮುಗಿಸಿ ನಮ್ಮ ಆ ದಿನದ ಕಾರ್ಯಕ್ರಮಕ್ಕೆ ಮುಂದಡಿಯಿಟ್ಟಾಗ ನಮ್ಮೆದುರು ತೆರೆದು ನಿಂತಿದ್ದು ಅಮರ ಅನಂತರಾಮರ ಭಗೀರಥ ಪ್ರಯತ್ನದ ಸಣ್ಣ ೨ ಘಂಟೆಗಳ ಟ್ರೈಲರ್/trailer. ಅರ್ಧ ವ್ರತ್ತಾಕಾರದ ಪ್ರತಿ ಮೆಟ್ಟಲುಗಳ ಇಳಿಯುವಾಗಲೂ ಪಕ್ಕದ ಗೋಡೆಯ ಮೇಲಿನ ಕಲೆಗಾರನ ಕಲೆ, ಅದರಲ್ಲಿ ಪುರಾಣದ ಕಥೆಗಳು, ಅವುಗಳ ಔಚಿತ್ಯಪೂರ್ಣ ವಿವರಣೆ. ಆ ಎರಡು ತಾಸಿನಲ್ಲಿ ಶ್ರೀನಿವಾಸರ ಕಂಗಳ ಹೊಳಪಿನಲ್ಲಿ ನಮ್ಮ ಜೊತೆ ನಡೆದಾಡಿದ್ದು ಶ್ರೀ ಅನಂತರಾಮರ ಶ್ರದ್ಧೆ, ಕಲ್ಪನೆ, ಕಲೋಪಾಸನೆ, ಸನಾತನದ ಶ್ರೇಷ್ಠತೆ, ಪರಿಪೂರ್ಣತೆಯ ಪರಾಕಾಷ್ಟೆ.
ಬೀಳ್ಕೊಡುಗೆಯಲ್ಲೂ ನಮ್ಮ ಸಂಪ್ರದಾಯದ ಫಲ ತಾಂಬೂಲ. ಖಂಡಿತ ಮತ್ತೆ ಬನ್ನಿ ಎಂಬ ಭರವಸೆಯ ಸಂದೇಶ.
ಒಬ್ಬ ತಂದೆಯ-ಗಂಡನ ಕನಸನು ನನಸು ಮಾಡಲು ಆತನ ಕೈಗೆ ಕೈ, ಭುಜಕ್ಕೆ ಬಲ, ಆ ಕಾರ್ಯಕ್ಕೆ ಬೇಕಾದ ಸಮಯ, ಸಹಾಯ ಮತ್ತು ಶ್ರದ್ಧೆಯನ್ನು ಅವಿರತವಾಗಿ ಅಪೇಕ್ಷೆಯಿಲ್ಲದೆ ಪರಿಶ್ರಮಿಸಿರುವ ಅಮರ ಅನಂತರಾಮ ಮತ್ತು ಶ್ರೀಮತಿ ಜಯಲಕ್ಷ್ಮಿ ಕುಟುಂಬದ ಸನಾತನ ಪ್ರಜ್ಞೆಯ ಕಾಪಿಡುವ ಪ್ರಯತ್ನವ ವರ್ಣಿಸಲು ಪದಗಳು ಸಾಲದು.
ನಮ್ಮನ್ನೆಲ್ಲ ತೆರೆದ ಕೈ ಮತ್ತು ಹೃದಯದಿಂದ ಸ್ವಾಗತಿಸಲು ಕರೆಯುತ್ತಿರುವ ಓಂತಾರ ಕಲಾ ಕುಟೀರಕ್ಕೆ ನಮ್ಮ ಮುಂದಿನ ಭೇಟಿ ಬಹು ಬೇಗ.
ನಿಮ್ಮ ಮನಸ್ಸಿನ ಭಾವನೆಗಳನ್ನು ಹೀಗೆ ಕದಡಲು ಓಂತಾರ ಕಲಾ ಕುಟೀರಕ್ಕೆ ಒಂದು ಅವಕಾಶ ಕಲ್ಪಿಸಿದರೆ ಈ ನನ್ನ ಪ್ರಯತ್ನಕ್ಕೆ ಸಾರ್ಥಕತೆ
https://omthara.com/about-us/creators-of-omthara-kala-kuteera/
ಶುಭಂ
No comments:
Post a Comment